ದಾವಣಗೆರೆ ಬಗ್ಗೆ

ದಾವಣಗೆರೆ ನಗರವು – ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರುನಿಂದ 265 ಕಿ.ಮಿ. ದೂರದಲ್ಲಿರುವ ಈ ಜಿಲ್ಲಾ ಆಡಳಿತ ಕೇಂದ್ರವು ರಾಷ್ಟ್ರೀಯ ಹೆದ್ದಾರಿ – 4ರಲ್ಲಿದೆ. ದಾವಣಗೆರೆ ನಗರವು 1997ರ ತನಕ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದು, ತದನಂತರ ರಾಜ್ಯ ಸರ್ಕಾರವು ಇದನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿದೆ. ಈ ಜಿಲ್ಲೆಯನ್ನು “ಬಯಲು ಸೀಮೆ”ಯ ಅಥವಾ “ಮೈದಾನ” ಪ್ರದೇಶವೆಂದು ಗುರುತಿಸಿದೆ.

ಈ ಜಿಲ್ಲೆಯ ಸುತ್ತಲಿನ ಪ್ರದೇಶದಲ್ಲಿನ ಹವಾ ಗುಣಕ್ಕೆ ತಕ್ಕಂತೆ ಜೋಳ, ಹತ್ತಿ, ಶೇಂಗಾ ಹಾಗೂ ಭತ್ತ ಬೆಳೆಯಲಾಗುತ್ತಿದೆ. ಆದರೆ “ಹತ್ತಿ” ಬೆಳೆಯನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದುದರಿಂದ ಹತ್ತಿ ನೂಲಿನ ಗಿರಣಿಗಳು ಮತ್ತು ಕೈಮಗ್ಗ ಕೇಂದ್ರಗಳು ಸ್ಥಾಪಿತಗೊಂಡಿರುತ್ತವೆ. ಕಾಲಕ್ರಮೇಣ ಅತ್ಯುನ್ನತ ಗುಣಮಟ್ಟದ ಹತ್ತಿ ಬಟ್ಟೆಯನ್ನು ತಯಾರಿಸುವ ಕಾರ್ಖಾನೆಗಳು ಪ್ರಾರಂಭಗೊಂಡು – ದಾವಣಗೆರೆಯಲ್ಲಿರುವ ಹತ್ತಿ ಕಾರ್ಖಾನೆಗಳಲ್ಲಿ ತಯಾರಾದ ಹತ್ತಿ ಬಟ್ಟೆಗಳಿಗೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉನ್ನತ ಮಟ್ಟದ ಸ್ಥಾನ ಹೊರತು ದಾವಣಗೆರೆಯನ್ನು ಕರ್ನಾಟಕದ “ಮ್ಯಾಂಚೆಸ್ಟರ್ ಪಟ್ಟಣ” ವೆಂದು ಕರೆಯಲಾಯಿತು.

ದಾವಣಗೆರೆಯ ಪೂರ್ವಭಾಗದಲ್ಲಿ – ಚಿತ್ರದುರ್ಗ ಜಿಲ್ಲೆ; ಉತ್ತರಕ್ಕೆ – ಬಳ್ಳಾರಿ; ಪಶ್ಚಿಮಕ್ಕೆ – ಹಾವೇರಿ ಹಾಗೂ ದಕ್ಷಿಣ ಭಾಗದಲ್ಲಿ ಶಿವಮೊಗ್ಗ ಜಿಲ್ಲೆಗಳು ರಸ್ತೆ ಮತ್ತು ರೈಲು ಸಾರಿಗೆ ಸಂಪರ್ಕ ಹೊಂದಿರುತ್ತದೆ.

ಆಕರ್ಷಣೀಯ ಕೇಂದ್ರಗಳು

ಕುಂದುವಾಡ ಕೆರೆ

(ಕುಂದವಾಡ ಕೆರೆ ಪರಿವರ್ತಿತ ಮಲ್ಲಿಕಾರ್ಜುನ ಸಾಗರ) ದಾವಣಗೆರೆ ನಗರದಲ್ಲಿ ಕುಂದುವಾಡ ಕೆರೆ ಅಥವಾ ಮಲ್ಲಿಕಾರ್ಜುನ ಸಾಗರ ಎಂದು ಕರೆಯಲ್ಪಡುವ ಈ ಸ್ಥಳವು ಆಕರ್ಷದಾಯಕ ಕೇಂದ್ರವಾಗಿದೆ. ಈ ಕೆರೆಯು ನಗರದ ನೀರು ಸರಬರಾಜು ವ್ಯವಸ್ಥೆಯ ಮುಖ್ಯ ಕೇಂದ್ರವಾಗಿದ್ದು, ಇದೊಂದು ಸೂರ್ಯಾಸ್ತಮ ವೀಕ್ಷಣೆಯ ಸ್ಥಳವಾಗಿದೆ. ಈ ನಗರದಲ್ಲಿ ಟಿ.ವಿ. ಸ್ಟೇಷನ್ ಹತ್ತಿರ ಇನ್ನೊಂದು ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದನ್ನು ವೀಕ್ಷಣೆಯ ಸರೋವರವೆಂದು ಮತ್ತು ಸಾರ್ವಜನಿಕರ ವಿಹಾರ ಸ್ಥಳವೆಂದು ಕರೆಯಲಾಗುತ್ತಿದೆ.

ಬಾತಿ ಗುಡ್ಡ

ದಾವಣಗೆರೆ ನಗರದಿಂದ 4ಕಿ.ಮೀ. ದೂರದಲ್ಲಿ ದಾವಣಗೆರೆ ಹರಿಹರ ರಸ್ತೆಯಲ್ಲಿದೆ. ಈ ಬೆಟ್ಟದ ತುದಿಯಲ್ಲಿನಿಂದ ದಾವಣಗೆರೆ ನಗರದ ವೀಕ್ಷಣೆಯು ತುಂಬಾ ಆಕರ್ಷಿತವಾಗಿರುತ್ತದೆ. ಈ ಬೆಟ್ಟದ ಬಳಿ ಭದ್ರಾ ಸಕ್ಕರೆ ಕಾರ್ಖಾನೆ ಮತ್ತು ಬಾತಿ ಕೆರೆ ಇದೆ ಹಾಗೂ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಹಾಲು ಸರಬರಾಜು ಮಾಡುವ “ಬಾತಿ” ಹಾಲಿನ ಡೈರಿಯು ಸಹ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕೊಂಡಜ್ಜಿ

ದಾವಣಗೆರೆ ನಗರದಿಂದ 12 ಕಿ.ಮೀ. ದೂರದಲ್ಲಿರುವ ಈ ಪ್ರದೇಶವು ದಕ್ಷಿಣ ಭಾರತದೆ “ಸ್ಕೌಟ್ಸ್ ಮತ್ತು ಗೈಡ್ಸ್” ಕವಾಯತು ಶಿಬಿರವಾಗಿದೆ. ಈ ಹಿಂದಿನ ಸ್ಕೌಟ್ಸ್ ಮತ್ತು ಗೈಡ್ಸ್ ಕಮಿಷನರ್ ಆಗಿದ್ದ ಕೊಂಡಜ್ಜಿ ಬಸಪ್ಪನವರು ನಮ್ಮ ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದರು ಮತ್ತು ಮಂತ್ರಿಗಳಾಗಿದ್ದರು. ಅವರು “ಸ್ಕೌಟ್ಸ್ ಮತ್ತು ಗೈಡ್ಸ್” ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅವರ ಸ್ಮರಾಣಾರ್ಥ “ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್” ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೊಂಡಜ್ಜಿ ಗ್ರಾಮವು ಚಿಕ್ಕ ಗುಡ್ಡ ಬೆಟ್ಟಗಳು ಮತ್ತು ಕೆರೆ ಕೊಳ್ಳಗಳಿಂದ ಸುತ್ತುವರೆದಿದೆ. ಇಲ್ಲಿ ದೋಣಿ ವಿಹಾರ (ಬೋಟಿಂಗ್) ವ್ಯವಸ್ಥೆಯು ಸಹ ಇದೆ.

ಸೂಳೆಕೆರೆ (ಶಾಂತಿಸಾಗರ)

ದಾವಣಗೆರೆ ನಗರ ಮತ್ತು ಸುತ್ತಲಿನ ಪ್ರದೇಶದೊಳಗೆ ಇಲ್ಲಿಂದ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಿದೆ. ಈ ಕೆರೆಯಿಂದ ಲಕ್ಷಾಂತರ ಎಕರೆ ಭೂಪ್ರದೇಶದ (ಜಮೀನಿನ) ಬೆಳೆಗಳಿಗೆ ನೀರು ಒದಗಿಸಲಾಗುತ್ತಿದೆ. ಈ ಕೆರೆಯು ಏಷಿಯಾ ಖಂಡದಲ್ಲಿ 2ನೇ ಅತೀ ದೊಡ್ಡ ಕೆರೆಯೆಂದು ಗುರುತಿಸಲಾಗಿದೆ. ಈ ಕೆರೆಯನ್ನು 12ನೇ ಶತಮಾನದಲ್ಲಿ “ಶಾಂತಿ” ಎಂಬ ರಾಜಕುಮಾರಿ ನಿರ್ಮಿಸಿದರು. ಸರ್ ಎಂ.ವಿಶ್ವೇಶ್ವರಯ್ಯನವರು ವಿನ್ಯಾಸಗೊಳಿಸಿದ “ಅಕ್ವಡಕ್ಟ” ಕೇಂದ್ರವು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಸರೋವರದ ಬಳಿ ಬೆಟ್ಟದ ಮೇಲೆ ಶ್ರೀ ಸಿದ್ದೇಶ್ವರ ದೇವಾಲಯವಿದ್ದು, ಈ ದೇವಾಲಯವು ಪ್ರವಾಸಿಗರ ಕೇಂದ್ರವೆಂದು ಗುರುತಿಸಲಾಗಿದೆ.