ವಿಶ್ವವಿದ್ಯಾನಿಲಯದ ಬಗ್ಗೆ

ವಿಶ್ವವಿದ್ಯಾನಿಲಯದ ಸ್ಥಾಪನಾ ಪೂರ್ವ ಮಾಹಿತಿ

ದಾವಣಗೆರೆ ವಿಶ್ವವಿದ್ಯಾನಿಲಯವು ದಿನಾಂಕಃ18.08.2009ರಂದು ಕಾರ್ಯಾರಂಭ ಮಾಡಿದ್ದು, ಇದಕ್ಕೂ ಪೂರ್ವದಲ್ಲಿ – ಮೈಸೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳು – ದಾವಣಗೆರೆ ನಗರದಲ್ಲಿ ಹಲವು ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗಗಳನ್ನೊಳಗೊಂಡ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಿದ್ದವು.

ಮೈಸೂರು ವಿಶ್ವವಿದ್ಯಾನಿಲಯವು, ಅಂದಿನ ಚಿತ್ರದುರ್ಗ ಜಿಲ್ಲೆಯ (ದಾವಣಗೆರೆ ನಗರವನ್ನೊಳಗೊಂಡಂತೆ) ಉನ್ನತ ಶಿಕ್ಷಣಾರ್ಥಿಗಳ ಅಭ್ಯುದಯಕ್ಕಾಗಿ 1979-80ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿ, ಅದರಲ್ಲಿ 04 ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳನ್ನು ಪ್ರಾರಂಭಿಸಿತು. ಈ ಸ್ನಾತಕೋತ್ತರ ಕೇಂದ್ರದಲ್ಲಿ - ಅರ್ಥಶಾಸ್ತ್ರ; ವಾಣಿಜ್ಯಶಾಸ್ತ್ರ; ಸಂಖ್ಯಾಶಾಸ್ತ್ರ ಮತ್ತು ಇಂಗ್ಲೀಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳು ಪ್ರಾರಂಭಗೊಂಡವು. ಕುವೆಂಪು ವಿಶ್ವವಿದ್ಯಾನಿಲಯವು 1988ರಲ್ಲಿ ಸ್ಥಾಪಿತವಾದ ನಂತರ – ದಾವಣಗೆರೆ ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು ಜಾರಿಗೆ ಬಂದವು. ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಸ್ನಾತಕೋತ್ತರ ಕೇಂದ್ರವನ್ನು ದಾವಣಗೆರೆ ಸಮೀಪದ ತೋಳಹುಣಸೆ ಗ್ರಾಮದಲ್ಲಿ ಸುಮಾರು 80 ಎಕರೆ ವಿಶಾಲವಾದ ಪ್ರದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಶ್ರಮ ವಹಿಸಲಾಯಿತು. ರಾಜನಹಳ್ಳಿ ವಂಶಸ್ಥರು ಮತ್ತು ಬಾಪೂಜಿ ಎಜುಕೇಷನ್ ಅಸೋಸಿಯೆಷನ್ ಸಂಸ್ಥೆಯ ಸಹಾಯ ಹಸ್ತದೊಂದಿಗೆ ಈ ಸ್ಥಳದಲ್ಲಿ 24.10.1998ರಲ್ಲಿ ಹೊಸ ಸ್ನಾತಕೋತ್ತರ/ಆಡಳಿತ ಕಟ್ಟಡಗಳನ್ನು ನಿರ್ಮಿಸಲಾಯಿತು ಹಾಗೂ ಈ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಸ್ನಾತಕೋತ್ತರ ಜೀವರಸಾಯನಶಾಸ್ತ್ರ; ಸೂಕ್ಷ್ಮಜೀವಶಾಸ್ತ್ರ; ಆಹಾರಶಾಸ್ತ್ರ; ಎಂ.ಬಿ.ಎ; ಸಮಾಜಕಾರ್ಯ; ಶಿಕ್ಷಣ ಕೋರ್ಸ್‍ಗಳನ್ನು ಕುವೆಂಪು ವಿಶ್ವವಿದ್ಯಾನಿಲಯ ಪ್ರಾರಂಭಿಸಿತು. ಅಲ್ಲದೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳು ಮತ್ತು ಎಲ್ಲಾ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಅವಶ್ಯವಿರುವ ತರಗತಿ/ಪ್ರಯೋಗಾಲಯ ಕಟ್ಟಡಗಳು ಹಾಗೂ ಬೋಧಕ/ ಬೋಧಕೇತರರ ವಸತಿಗೃಹಗಳನ್ನು ಸಹ ನಿರ್ಮಿಸಲಾಯಿತು.

ವಿಶ್ವವಿದ್ಯಾನಿಲಯ ಸ್ಥಾಪನೆ

ಈ ಬಯಲು ಸೀಮೆ/ಮೈದಾನ ಪ್ರದೇಶದ ಭಾಗದಲ್ಲಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕೆಂಬ ಹಲವಾರು ವರ್ಷದ ಬೇಡಿಕೆಗನುಗುಣವಾಗಿ ದಿನಾಂಕಃ18.08.2009ರಂದು ರಾಜ್ಯ ಸರ್ಕಾರವು ದಾವಣಗೆರೆ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿತು. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಂತೆ ಈ ಹೊಸ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾನವು “ಶಿವಗಂಗೋತ್ರಿ” ಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆಃ04ಕ್ಕೆ ಹೊಂದಿಕೊಂಡಿದ್ದು, ಬಾಡಾ ಕ್ರಾಸ್‍ನಿಂದ 05 ಕೀ.ಮಿ. ದೂರದಲ್ಲಿ ಈ ವಿಶ್ವವಿದ್ಯಾನಿಲಯವು ತನ್ನ ಕಾರ್ಯಸೌಧವನ್ನು ಹೊಂದಿರುತ್ತದೆ. ದಾವಣಗೆರೆ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣದ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಈ ಕೆಳಕಂಡ ಧೇಯೋದ್ದೇಶಗಳನ್ನು ಹೊಂದಿದೆ.

ಸ್ನಾತಕೋತ್ತರ ಕೇಂದ್ರ ಜ್ಞಾನಗಂಗೋತ್ರಿ, ಚಿತ್ರದುರ್ಗ

ಸರ್ಕಾರದ ಅಂಕಿ ಅಂಶಗಳ ಪ್ರಕಾರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಚಿತ್ರದುರ್ಗ ಜಿಲ್ಲೆಯು – ಉನ್ನತ ಶಿಕ್ಷಣ, ಸ್ನಾತಕೋತ್ತರ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಅಲ್ಲದೆ, ಈ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ/ಪಂಗಡ ಮತ್ತು ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಹಿತದೃಷ್ಟಯಿಂದ ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 06 ಕಿ.ಮೀ. ದೂರದಲ್ಲಿರುವ ಗುಡ್ಡದ ರಂಗವ್ವನಹಳ್ಳಿಯಲ್ಲಿ 82 ಎಕರೆ ಊಧ್ರ್ವ ಪ್ರದೇಶದಲ್ಲಿ, ರಾಷ್ಟ್ರೀಯ  ಹೆದ್ದಾರಿ -13ರಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಈ ಕೇಂದ್ರದಲ್ಲಿ 2010-11ನೇ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಅರ್ಥಶಾಸ್ತ್ರ; ವಾಣಿಜ್ಯಶಾಸ್ತ್ರ; ಶಿಕ್ಷಣಶಾಸ್ತ್ರ; ಕನ್ನಡ; ಇಂಗ್ಲೀಷ್ ಕೋರ್ಸ್‍ಗಳನ್ನು ಪ್ರಾರಂಭಿಸಲಾಗಿದೆ. ಅಲ್ಲದೆ, ಈ ಕೇಂದ್ರದಲ್ಲಿ 2018-19ನೇ ಸಾಲಿನಲ್ಲಿ ವಿಜ್ಞಾನ ನಿಕಾಯದಡಿಯಲ್ಲಿ ಸಸ್ಯಶಾಸ್ತ್ರ ಕೋರ್ಸ್ ಪ್ರಾರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಹಾಗೂ ಉದ್ಯೋಗಾಧಾರಿತ ಕೋರ್ಸುಗಳನ್ನು ಪ್ರಾರಂಭಿಸುವ ಉದ್ದೇಶವನ್ನು ಈ ವಿಶ್ವವಿದ್ಯಾನಿಲಯ ಹೊಂದಿರುತ್ತದೆ.